ಶುಕ್ರವಾರ, ಜನವರಿ 18, 2013

ನೆನೆಪಿನಂಗಳದ ಪಯಣ


                                                       ನೆನೆಪಿನಂಗಳದ ಪಯಣ


ಆಷಾಢದ ಮಳೆ ಅಂದ್ರೆ ನೆನಪಾಗೋದು ನಮ್ಮೂರು. ನಮ್ಮೂರಿನಲ್ಲಿ ಎಡಬಿಡದೆ ಸುರಿಯೋ  ಆ ಮಳೆ ಎದ್ರಿಗೆ ಈ ಬಯಲು ನಾಡಿನ ಮಳೇನ ಸುಳಿದು ಬಿಸಾಕಬೇಕು ಅಂತ ಎಷ್ಟೋ ಸಾರಿ ಅನ್ಸಿದ್ದಿದೆ.  ನಾವು ಚಿಕ್ಕವರಿರುವಾಗ ಕೆಲವು ಸಾರಿ ವಾರಗಟ್ಟಲೆ ಬಿಸಲಿನ ಮುಖವೇ ಕಾಣ್ತಿರಲಿಲ್ಲ. ಎಂಥ  ಮಳೆ ಅಂದರೆ ಅಂಗಳ, ರಸ್ತೆ ಎಲ್ಲ ಪಿಚಿಪಿಚಿ ಕೆಸರು. ಕಾಲಿಟ್ಟರೆ ಕಾಲಿನ ಸಂದಿಯಲ್ಲಿ ಕೆಸರು ಮೆತ್ತಿಕೊಂಡು ಮೇಗಾಲವರಿಗೂ ಬರ್ತಿತ್ತು.  ಮಣ್ಣಿನ ರಸ್ತೆ. ದನಗಳು ಓಡಾಡೋದ್ರಿಂದ ಕೆಸರು ಒಣಗ್ತಿರಲಿಲ್ಲ. ಮನೆಯಲ್ಲಿ ಇರಲಿಕ್ಕೂ ಬೇಜಾರು, ಶಾಲೆಗೆ ಹೋಗದು ಇನ್ನೂ ಬೇಜಾರು.  ಪ್ರತಿ ಮನೆಯಲ್ಲಿ ಮೂರೋ ನಾಲಕ್ಕೋ ಮಕ್ಕಳು ಶಾಲೆಗೆ ಹೋಗೋರು. ನಮಗೆ ಕೊಡೆ ಕೊಡ್ತಿರಲಿಲ್ಲ. ತುಸು ಮಳೆ ಕಡಮೆ ಆದಾಗ ಶಾಲೆ ಹತ್ರ ಇದ್ದಿದ್ದರಿಂದ ಓಡಿಹೋಗ್ತಿದ್ವಿ. ತೀರ ಹಿಡಕಂಡು ಹೋಯ್ಯತಿದ್ರೆ ಯಾರಾದ್ರೂ ದೊಡ್ಡೋರು ಕೊಡೆ ತಗಂಡು ಬಂದು ನಮ್ಮನ್ನ ಶಾಲೆಗೆ ಬಿಡೋರು. ಗೋಣಿಕೊಪ್ಪೆ ಸೂಡಿಕೊಂಡು ಹೋಗಿ ಅಂದ್ರೆ ನಮಗೆ ಇಷ್ಟ ಆಗ್ತಿರಲಿಲ್ಲ.
ಜೋರು ಮಳೆಗಾಲದಲ್ಲಿ ಮೂರು ದಿವ್ಸ ಆದ್ರೂ ಬಟ್ಟೆ ಒಣಗದಿಲ್ಲ ಅಂತ ಅಮ್ಮ, ಅಕ್ಕಂದಿರು ಗೊಣಗುಟ್ತಿದ್ರು. ನಮಗೆ ಅದು ಗೊತ್ತಾಗ್ತಿರಲಿಲ್ಲ. ಯಾಕಂದ್ರೆ ಒಲೆ ಮುಂದೆ ಒಂದು ಬುಟ್ಟಿನೊ, ಪಾತ್ರೆನೊ ಕವುಚಿಟ್ಟು ನಮ್ಮ ಬಟ್ಟೇನ ಅದರ ಮೇಲೆ ಒಣಗ್ಸಿ ಆಗಾಗ ಅದನ್ನು ಮಗುಚಬೇಕಿತ್ತು. ನಮಗೆ ಮಜ ಅನ್ನುಸ್ತಿತ್ತು. ಒಲೆ ಎದುರಿಗೆ ನಾವೂ ಕೂರುತ್ತಿದ್ದೆವು. ಆ ಚಳಿಗೆ ಹಾಗೆ ಕೂರೋದು ಬೆಚ್ಚನೆ ಅನುಭವ. ಅದೊಂದು ಥರ ಆಟ ನಮಗೆ. ಮೊದಲೇ ಬಟ್ಟೆ ಒಣಗ್ತಿರಲಿಲ್ಲ, ಅಂತಾದ್ರಲ್ಲಿ ನಾವು ಶಾಲಿಂದ ಬರುವಾಗ ಬಟ್ಟೆಗೆ ಒಂದಿಷ್ಟು ಕೆಸರನ್ನ ಬಡಿದುಕೊಂಡು ಇಲ್ಲ ಕೆಸರ ನೀರನ್ನು ಸಿಡಿಸಿಕೊಂಡು ಮಳೆಯಲ್ಲಿ ತೊಯ್ಕೊಂಡೋ ಬರ್ತಿದ್ವಿ. ಆಗ ಶಾಲಿಂದ ಬಂದ್ಮೇಲೆ ಹೊರಗೆ ಹೋಗಿ ಆಡಕ್ಕೆ ಆಗ್ತಿರಲಿಲ್ಲ. ಮನೇಲಿ ಆಡ್ತಿದ್ವಿ. ಆಗೆಲ್ಲ ಮನೆ ತುಂಬ ಮಕ್ಳು. ಜಗಲೀಲಿ ಕಣ್ ಮುಚ್ಕೊಂಡು ಯಾರಾದ್ರು ಒಬ್ರು ಒಂದು ಎರಡು ಅಂತ ಹೇಳ್ತಾ ಕೂರೋದು, ಉಳುದವ್ರು ಬತ್ತದ ಕಣಜದ ಸಂದೀಲಿ, ಬಾಗಿಲ ಮೂಲೇಲಿ, ಹಾಸಿಗೆ ಹೊರೆ ಹಿಂದೆ, ಮೆತ್ತಿ ಮೆಟ್ಲಲ್ಲಿ ಅಡಿಗೆಮನೆ ಮೂಲೇಲಿ ಅಡಗಿ ಕೂರೋದು. ಒಬ್ರನ್ನ ಹುಡುಕೋದ್ರಲ್ಲಿ ಇಬ್ರೋ ಮೂವರೋ ಬಂದು ಕಂಬ ಮುಟ್ಟಿ ಆಗಿರ್ತಿತ್ತು. ಮತ್ತೆ ಅವ್ರೇ ಕಣ್ಣುಮುಚ್ಚಿ ಕೂರಬೇಕಾಗಿತ್ತು. ಎರಡೋ ಮೂರೋ ಮನೆಯ ಮಕ್ಕಳು ಸೇರಿದರೆ   ಟೋಪಿ ಆಟ.
ಹೆಸರು ಟೋಪಿ ಆಟ ಆದ್ರೂ ನಮ್ಗೆ ಟೋಪಿ ಸಿಗ್ತಿರಲಿಲ್ಲ. ಹಳೇ ಟವೆಲ್ಲೋ, ಚೀಲವೋ ನಮ್ಮ ಟೋಪಿಯಾಗ್ತಿತ್ತು. ಯಾರು ಟೋಪಿ ಹಾಕೋರು ಅಂತ ನಿರ್ಣಯಿಸಕ್ಕೆ ಎಲ್ಲರೂ ಸುತ್ತಲೂ ನಿಂತು ಕೈಮೇಲೆ ಕೈ ಹಾಕೋದು. ಯಾರು ಎಲ್ಲರಿಗಿಂತ ಉಲ್ಟಾ ಆಗಿ ಕೈನ ಮಗುಚಿ ಅಥವಾ ಅಂಗಾತವಾಗಿ ಕೈ ಮೇಲೆ ಕೈ ಹಾಕ್ತಾರೋ ಅವರು ಟೋಪಿ ಹಾಕೋರು ಅಂದ್ರೆ ಕಳ್ಳ. ಎಲ್ಲ ಆಟಕ್ಕೂ ಇದೇ ನಿಯಮ. ಸುತ್ತಲೂ ಕುಳಿತವರು ಕಣ್ಣು ಮುಚ್ಚಿರಬೇಕು. ಕಳ್ಳ ಆದೋರು ಅವರೆಲ್ಲರನ್ನು ಸುತ್ತುತ್ತಾ ಯಾರದೋ ಹಿಂದೆ ಟೋಪಿಯನ್ನು ಇಡೋರು. ಇನ್ನೊಂದು ಸುತ್ತು ಬರೋದ್ರೊಳಗೆ ಟೋಪಿ ಹಾಕಿಸಿಕೊಂಡೋರು ಅದನ್ನು ಹಿಡಿದು ಕಳ್ಳನನ್ನು ಅಟ್ಟಿಸಿಕೊಂಡು ಹೋಗಬೇಕು. ಟೋಪಿ ಹಾಕಿಸಿಕೊಂಡವನ ಜಾಗದಲ್ಲಿ ಕಳ್ಳ ಕೂರ್ಬೇಕು. ಅದಕ್ಕೆ ತಪ್ಪಿದರೆ ಅವನೇ ಮತ್ತೆ ಕಳ್ಳ. ಟೋಪಿ ಹಾಕಿಸಿಕೊಂಡವನಿಗೆ ತನ್ನ ಹಿಂದೆ ಟೋಪಿ ಇದೆ ಅನ್ನೋದು ಗೊತ್ತಾಗದಿದ್ರೆ  ಒಂದು ಸುತ್ತು ಬಂದ  ಕಳ್ಳ ಅವನನ್ನು ಅಟ್ಟಿಸಿಕೊಂಡು ಹೋದ ಅಂದ್ರೆ ಈಗ ಅವನೇ ಕಳ್ಳ.  ಆ ಆಟ ಎಂಥ ಖುಶಿ ಕೊಡೋದು. ಇದಕ್ಕೆ ಹುಡಗ್ರು ಹುಡ್ಗೀರು ಅನ್ನ ಭೇದ ಇರಲಿಲ್ಲ.